ನೀವು ಅಧ್ಯಾಪಕರಾಗಿರಬಹುದು, ವಿದ್ಯಾರ್ಥಿಗಳಾಗಿರಬಹುದು, ಸಮಾಜದ ಇತರ ಯಾವುದೇ ಒಂದು ವಾಹಿನಿಯಲ್ಲಿ ಸೇರಿಕೊಂಡವರಾಗಿರಬಹುದು. ಆದರೆ ನೀವು ಅತ್ಯಗತ್ಯವಾಗಿ ಒಮ್ಮೆ ಮಂಗಲ್ಪಾಡಿಗೆ ಬರಬೇಕು. ಅಂತಹ ಒಂದು ವಿಶೇಷ ಸ್ಥಳವಿದು ಎನ್ನಲು ಹೆಮ್ಮೆಯಿದೆ. ಇಲ್ಲಿ ಏನಿಲ್ಲ? ಸಮುದ್ರ ಕರಾವಳಿಯ ತಂಪು ಗಾಳಿಗೆ ತೊನೆವ ತೆಂಗುಗಳ ಆಚೆ ಈಚೆ ನಾವು ಎಲ್ಲವನ್ನೂ ಸಹಿಸಿ ಬದುಕುವುದಕ್ಕೂ ನೆರಳು ನೀಡುವುದಕ್ಕೂ ಸಿದ್ಧರಾಗಿ ನಿಂತವರೆಂದು ಸಾರುವ ಗಾಳಿ ಮರಗಳ ಮಧುರ ನಿನಾದದೆಡೆಯಲ್ಲಿ
ಒಮ್ಮೆ ಸಾಗಿ ಬನ್ನಿ. ರಾಷ್ಟ್ರೀಯ ಹೆದ್ದಾರಿಯ ಆಚೆ ಈಚೆ ಹರಡಿ ನಿಂತಿರುವ ಈ ಮುದ್ದು ಗ್ರಾಮದ ಸೌಂದರ್ಯಕ್ಕೆ ಮೆರಗನ್ನೀಯುವ ನಮ್ಮ ಶಾಲೆಯನ್ನು ನೀವು ಅತ್ಯಗತ್ಯವಾಗಿ ನೋಡಬೇಕು. ವಿಚಾರಿಸಬೇಕು. ಯಾಕೆ ಗೊತ್ತೆ? ಒಂದು ಕಾಲದಲ್ಲಿ "ಕುಕ್ಕಾರು ಶಾಲೆ ಅಯ್ಯೋ ದೇವರೇ" ಎದು ಎಲ್ಲರ ಬಾಯಿಯಿಂದ ಉದ್ಗಾರ ಬರುತ್ತಿದ್ದ ಮಂಗಲ್ಪಾಡಿ ಗ್ರಾಮದಲ್ಲರುವ, ಈಗ ಸರಕಾರಿ ಹಿರಿಯ ಮಾಧ್ಯಮಿಕ ಶಾಲೆಯಾಗಿ ರೂಪುಗೊಂದಿರುವ ನಮ್ಮ ಶಾಲೆ ಇಂದು ಚರಿತ್ರೆಯನ್ನೇ ಬದಲಾಯಿಸಿ ತಲೆಯೆತ್ತಿ ನಿಂತಿದೆ. ಅದರ ಸೊಬಗನ್ನು ಸವಿಯಬೇಕಾದರೆ ಅಲ್ಲಿಗೆ ಬರಬೇಕು. ಹೀಗಾದುದು ಹೇಗೆ ಎಂದು ಅರಿತುಕೊಳ್ಳಬೇಕು. ನಮ್ಮ ಶಾಲಾ ಆವರಗೋಡೆಯ ಒಳಗಡೆ ಪ್ರವೇಶಿಸಿದ ಕೂಡಲೇ ಇತರ ಶಾಲೆಗಳಿಗಿಂತ ಭಿನ್ನವಾಗಿ ಶಿಸ್ತಿನ ಪತಾಕೆ ಹಾರುತ್ತಿರುವುದನ್ನು ನೀವು ಗಮನಿಸುವಿರಿ. ಮಕ್ಕಳೆಲ್ಲ ತರಗತಿಯ ಒಳಗೆ ಕುಳಿತು ತಮ್ಮದೇ ಆದ ಕೆಲಸಗಳಲ್ಲಿ ತೊಡಗಿರುತ್ತಾರೆ.
0 comments:
Post a Comment